ಭಾತ್ಖಂಡೆ ವಿಷ್ಣುನಾರಾಯಣ
1860-1936. ಹಿಂದೂಸ್ಥಾನೀ ಸಂಗೀತ ಕೋವಿದ ಹಾಗೂ ಸಂಶೋಧಕ. ಸಂಗೀತ ಪದ್ಧತಿಯಲ್ಲಿ ಸರ್ವಾಂಗೀಣ ಸಂಶೋಧನೆ ನಡೆಸಿ ಸಂಗೀತಕಲೆಯನ್ನು ಶಾಸ್ತ್ರಶುದ್ಧವಾಗಿ ಹೇಗೆ ಅಭ್ಯಾಸ ಮಾಡಲು ಸಾಧ್ಯ ಎಂಬುದನ್ನು ಕಲಾವಿದರಿಗೆ ತೋರಿಸಿಕೊಟ್ಟು ಹೊಸಮಾರ್ಗ ಸೃಜಿಸಿದ ಮಹಾನ್ ವ್ಯಕ್ತಿ. ಈ ಮಾರ್ಗ ಈಗ ಭಾತ್ಖಂಡೆ ಪದ್ಧತಿಯೆಂದೇ ಪ್ರಸಿದ್ಧವಾಗಿದೆ.

ಇವರ ಜನ್ಮಸ್ಥಳ ಮುಂಬಯಿ. ತಂದೆ ನಾರಾಯಣರಾವ್ ಒಂದು ಎಸ್ಟೇಟಿನ ವ್ಯವಹಾರ ನೋಡಿಕೊಳ್ಳುತ್ತಿದ್ದವರು. ಇವರು ಬಾಲ್ಯದಿಂದಲೇ ಸಂಗೀತಾಭ್ಯಾಸ ಮಾಡಿಕೊಂಡು ಬಂದರು. ಎಲ್‍ಫಿನ್‍ಸ್ಟನ್ ಹೈಸ್ಕೂಲಿನ ಮ್ಯಾಟ್ರಿಕ್ (1880), ಅದೇ ಕಾಲೇಜಿನಿಂದ ಬಿ.ಎ. (1885) ಮತ್ತು ಎಲ್‍ಎಲ್‍ಬಿ (1887) ಪರೀಕ್ಷೆಗಳನ್ನು ಪಾಸುಮಾಡಿ ವಕೀಲಿ ಆರಂಭಿಸಿದರು. ಆದರೆ ಅವರಲ್ಲಿ ಹುದುಗಿದ್ದ ಸಂಗೀತಕಲೆ ಅವರನ್ನು ತನ್ನತ್ತ ಸೆಳೆಯಿತು. ಸಂಗೀತಶಾಸ್ತ್ರದ ಸಾಂಗೋಪಾಂಗ ಅಧ್ಯಯನಕ್ಕೆ ಟೊಂಕ ಕಟ್ಟಿ ನಿಂತರು. ಮರಾಠೀ, ಗುಜರಾತಿ, ಸಂಸ್ಕøತ, ಹಿಂದೀ ಹೀಗೆ ಹಲವಾರು ಭಾಷೆಗಳಲ್ಲಿಯ ಸಂಗೀತಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಬೀನ್ ಹಾಗೂ ಸಿತಾರ ವಾದ್ಯಗಳನ್ನು ಇವರು ತುಂಬ ಚೆನ್ನಾಗಿ ನುಡಿಸುತ್ತಿದ್ದರು. ಇವರ ಬಾಜನೆ ಕೌತುಕಮಯದ್ದಾಗಿತ್ತು. ಇವರಿಗೆ ತಾನರಸಖಾನ್, ಇನಾಯತ ಹುಸ್ಸೇನ್‍ಖಾನ್, ನತ್ಥನಖಾನ್, ಅಲಿಹುಸೇನ್‍ಖಾನ್ ಮುಂತಾದ ಮಹಾನ್ ಕಲಾವಿದರ ಸಂಗೀತ ಕೇಳುವ ಸುಯೋಗ ದೊರಕಿತು. ಧ್ರುಪದ, ಹೋರೀ, ಖಯಾಲ್, ತರಾನಾ, ಠುಮರೀ ಮುಂತಾಗಿ ಅನೇಕ ಬಗೆಯ ಚೀಜಗಳನ್ನು (ಕೃತಿ) ಸಂಗ್ರಹಿಸಿದರು. ಪರಂಪರಾನುಗತ ವಿದ್ಯೆಯ ಜ್ಞಾನಸಂಪತ್ತು ಇವರಿಗೆ ದೊರೆಯಿತು. ವಿವಿಧ ಘರಾಣೆಗಳ ವಿದ್ವಾಂಸರನ್ನು ಭೇಟಿಯಾಗಿ ಅವರಿಂದ ಆಯಾ ಘರಾಣೆಗಳ ವೈಶಿಷ್ಯಗಳನ್ನೂ ರೀತಿನೀತಿಗಳನ್ನೂ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಆಶಕ್ ಅಲೀ ಎಂಬ ಗಾಯಕರಿಂದ 250 ಖಯಾಲಗಳನ್ನು ಕಲಿತು ಅವಕ್ಕೆ ಸ್ವರ ಪ್ರಸ್ತಾರ ಹಾಕಿ ಪ್ರಕಟಿಸಿದರು. ಇಡೀ ಭರತಖಂಡ ಸುತ್ತಿ ಅಲ್ಲಲ್ಲಿ ದೊರೆತ ಅನೇಕ ಸಂಗೀತ ಶಾಸ್ತ್ರಗಳ ಅಧ್ಯಯನ ನಡೆಸಿ ಗಾಯಕನನ್ನು ಭೇಟಿಯಾಗಿ ಸಂಗೀತಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದರು. ಅನಂತರ ಮರಾಠೀ, ಹಿಂದೀ, ಇಂಗ್ಲಿಷ್ ಭಾಷೆಗಳಲ್ಲಿ ಲೇಖನಗಳನ್ನು ಪುಸ್ತಕಗಳನ್ನೂ ಪ್ರಕಟಿಸಿದರು. ಇವರು ಬರೆದ ಪುಸ್ತಕಗಳು: ಹಿಂದೂಸ್ಥಾನೀ ಸಂಗೀತ ಪದ್ಧತಿ; ಶ್ರೀಮಲ್ಲಕ್ಷ್ಯ ಸಂಗೀತಮ್; ಅಭಿನವರಾಗಮಂಜರೀ; ಗೀತಮಾಲಿಕಾ; ಪಾರಿಜಾತ ಪ್ರವೇಶಿಕಾ ಮತ್ತು ರಾಗವಿಬೋಧಪ್ರವೇಶಿಕಾ, ಸಂಗೀತಶಾಸ್ತ್ರ ಶಿಕ್ಷಣಕ್ಕೆಂದು ಗ್ವಾಲಿಯರ್ ಬಡೋದೆ ಸಂಸ್ಥಾನಗಳ ಅಧಿಪತಿಗಳ ಮನವೊಲಿಸಿ ಸಹಾಯ ಪಡೆದು ಕಾಲೇಜುಗಳನ್ನು ಆರಂಭಿಸಿದರು. ಆ ಕಾಲೇಜುಗಳಲ್ಲಿ ಪಾಠ ಕಲಿಸಲು ಪಠ್ಯಪುಸ್ತಕಗಳನ್ನು ಸಿದ್ಧ ಮಾಡಿಕೊಟ್ಟರು; ಇವರು ತಮ್ಮ ಜೀವತಾವಧಿಯಲ್ಲಿ 181 ರಾಗಗಳನ್ನು ಮತ್ತು 1874 ಚೀಜ್‍ಗಳನ್ನು ಸ್ವರಲಿಪಿ ಸಹಿತ ಸಂಕಲನೆ ಮಾಡಿ ಮಹತ್ಕಾರ್ಯ ಎಸಗಿದ್ದಾರೆ. ಹಿಂದೂಸ್ಥಾನಿ ಸಂಗೀತಕ್ಕೆ ಕಲ್ಯಾಣಥಾಟ್ ಬಿಲಾವಲ್ ಥಾಟ್ ಖಮಾಚ್ ಥಾಟ್ ಭೈರವೀನಾಥ್ ಮತ್ತು ತೋಡಿಥಾಟ್ ರಾಗಗಳೇ ಮುಖ್ಯವೆಂದೂ ಆಯಾ ಥಾಟುಗಳಲ್ಲಿ ಹುಟ್ಟುವ ಜನ್ಯರಾಗಗಳ ವಿಷಯವನ್ನು ಕ್ರಮಬದ್ಧವಾಗಿ ನಿರೂಪಿಸಿದ್ದಾರೆ. ಇವರ ಶಿಷ್ಯರಲ್ಲಿ ಮುಖ್ಯರೆಂದರೆ ಲಖನೌದ ಮಾರಿಸ್ ಮ್ಯೂಜಿಕ್ ಕಾಲೇಜ್ ಪ್ರಿನ್ಸಿಪಾಲರಾಗಿದ್ದ ದಿವಂಗತ ರಾತಂಜನಕರ್ ಹಾಗೂ ಗ್ವಾಲಿಯರಿನ ಮಾಧವ ಮ್ಯೂಜಿಕ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪಂಡಿತ ರಾಜಾಭಯ್ಯಾ ಪೂಂಛವಾಲೆ. ಇವರ ಘರಾಣೆ ಪದ್ಧತಿ ಹೈದರಾಬಾದಿನಲ್ಲಿಯ ಸರ್ಕಾರೀ ಕಾಲೇಜಿನ ಪ್ರಿನ್ಸಿಪಾಲರಾದ ಜಿ.ಎನ್. ದಂತಾಲೆ ಹಾಗೂ ರಾಜೂರ್ಕರ್ ಮೊದಲಾದವರಿಂದ ಮುಂದುವರಿದಿದೆ.   					
(ಎಸ್.ಎಸ್.ಜೆ.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ